Saturday, 22 August 2015

ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದು ಆತನ ಪಾಸ್‌ಪೋರ್ಟ್ ಹಾಗೂ ಪತ್ನಿಯ ಫೋನ್ ಬಿಲ್‌ನಿಂದ ಮತ್ತೊಮ್ಮೆ ಸಾಬೀತಾಗಿದೆ.


ದಾವೂದ್ ನಮ್ಮ ದೇಶದಲಿಲ್ಲ ಎಂದು ಪಾಕಿಸ್ತಾನ ವಾದಿಸುತ್ತಿದೆ. ಆದರೆ ಭಾರತೀಯ ಭದ್ರತಾ ಸಂಸ್ಥೆ ಈಗ ಹೊಸ ಸಾಕ್ಷ್ಯಗಳ ಮೂಲಕ ಪಾತಕಿ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನು ಸಾಬೀತುಪಡಿಸಿದೆ.


ಭದ್ರತಾ ಸಂಸ್ಥೆಗೆ ದೊರೆತ ದಾವೂದ್ ಇಬ್ರಾಹಿಂ ಪಾಸ್‌ಪೋರ್ಟ್, ಇತ್ತೀಚಿನ ಫೋಟೋ ಹಾಗೂ ಪತ್ನಿಯ ಫೋನ್ ಬಿಲ್‌ನಲ್ಲಿ ಪಾಕಿಸ್ತಾನದ ಕರಾಚಿಯ ವಿಳಾಸ ಇದೆ.

ದಾವೂದ್ ಪತ್ನಿ, ಪುತ್ರ ಮೊಯೀನ್ ನವಾಜ್ ಹಾಗೂ ಇಬ್ಬರು ಪುತ್ರಿಯರಾದ ಮಹರುಖ್, ಮೆಹ್ರೀನಾ ಪಾಕಿಸ್ತಾನದಲ್ಲೇ ವಾಸವಾಗಿದ್ದಾರೆ. ಸದ್ಯ ಕರಾಚಿ ಸಮೀಪದ ಕ್ಲಿಫ್ಟನ್‌ನಲ್ಲಿ ದಾವೂದ್ ವಾಸವಾಗಿದ್ದಾರೆ ಎಂದು ಭಾರತೀಯ ಭದ್ರತಾ ಸಂಸ್ಥೆ ಹಿಂದೂಸ್ಥಾನ್ ಟೈಮ್ಸ್‌ಗೆ ಹೇಳಿದೆ.


ದಾವೂದ್, ಶೇಖ್ ದಾವೂದ್ ಹಸನ್ ಹೆಸರಿನಲ್ಲಿ ಪಾಸ್‌ಪೋರ್ಟ್ ಹೊಂದಿದ್ದು, ಕುಟುಂಬದೊಂದಿಗೆ ಹಲವು ಬಾರಿ ಪಾಕಿಸ್ತಾದಿಂದ ದುಬೈಗೆ ಪ್ರಯಾಣ ಮಾಡಿರುವುದು ಭದ್ರತಾ ಸಂಸ್ಥೆಗಳಿಗೆ ದೊರೆತ ನೂತನ ಸಾಕ್ಷ್ಯಗಳಿಂದ ಸಾಬೀತಾಗಿದೆ. ಅಲ್ಲದೆ ದಾವೂದ್ ಕನಿಷ್ಠ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾನೆ ಎಂದು ಭದ್ರತಾ ಸಂಸ್ಥೆ ತಿಳಿಸಿದೆ.

ಭಾರತ-ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ ಸೋಮವಾರ ನಡೆಯಲಿದ್ದು, ಈ ವೇಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರು, ದಾವೂದ್ ಪಾಕಿಸ್ತಾನದಲ್ಲೇ ಇರುವ ಬಗ್ಗೆ ಲಭ್ಯವಾಗಿರುವ ಹೊಸ ಸಾಕ್ಷ್ಯಗಳನ್ನು ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಗಮನಕ್ಕೆ ತರಲಿದ್ದಾರೆ ಎನ್ನಲಾಗಿದೆ.

No comments:

Post a Comment