ನವದೆಹಲಿ: ದೇಶದಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹ ನಡೆದ ರಾಜ್ಯಗಳ ಪೈಕಿ ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ.
ದೇಶದಲ್ಲಿ ವರದಿಯಾದ 280 ಬಾಲ್ಯ ವಿವಾಹಗಳ ಪೈಕಿ ಅರ್ಧದಷ್ಟು ಪ್ರಕರಣಗಳು ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ವರದಿಯಾಗಿವೆ.
ಭಾರತದ ಇನ್ನಿತರ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ, ಗುಜರಾತ, ಹರಿಯಾಣ, ಮಧ್ಯ ಪ್ರದೇಶಗಳಲ್ಲಿ ಕೂಡ ಈ ಸಾಮಾಜಿಕ ಪಿಡುಗು ಇನ್ನೂ ಜಾರಿಯಲ್ಲಿದೆ. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕಳೆದ ವರ್ಷ ಎರಡು ಪ್ರಕರಣಗಳು ವರದಿಯಾಗಿವೆ.
2014ರ ಅವಧಿಯಲ್ಲಿ ದೇಶದಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಅಧ್ಯಯನ ನಡೆಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಮಿತಿ ನೀಡಿದ ವರದಿಯಲ್ಲಿಈ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಸಂತಸಪಡುವ ವಿಷಯವೆಂದರೆ ಉತ್ತರ ಭಾರತ, ಈಶಾನ್ಯ ರಾಜ್ಯಗಳು, ಗೋವಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡದಲ್ಲಿ ಅನಿಷ್ಟ ಪದ್ಧತಿಯ ಸುಳಿವಿಲ್ಲ.
ಕಾರಣ ಏನು?: ಸಾಮಾಜಿಕ ಅನಿಷ್ಟ ಪದ್ಧತಿಯಾದ ಬಾಲ್ಯ ವಿವಾಹಗಳನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದೇ ಸಮಸ್ಯೆ ಹೆಚ್ಚಳಕ್ಕೆ ಕಾರಣ ಎಂದು ವರದಿ ಅಸಮಾಧಾನ ವ್ಯಕ್ತಪಡಿಸಿದೆ.
ಬಾಲ್ಯ ವಿವಾಹ ತಡೆ ಕಾಯ್ದೆ ಕಟ್ಟುನಿಟ್ಟಾಗಿ ಪಾಲನೆಯಾಗದಿರುವುದು ಮತ್ತೊಂದು ಕಾರಣ ಎಂದು ಹೇಳಲಾಗಿದೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 2014ರ ಅಂಕಿಸಂಖ್ಯೆಗಳು ನಿಖರವಾಗಿಲ್ಲ. ವರದಿಯಲ್ಲಿ ಹೇಳಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಾಲ್ಯ ವಿವಾಹ ನಡೆದಿವೆ ಎಂದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಒಪ್ಪಿಕೊಂಡಿದೆ.
ತೀರಾ ಇತ್ತೀಚಿನ ವರದಿ ಪ್ರಕಾರ ದೇಶದ 20–24 ವಯೋಮಾನದ ವಿವಾಹಿತ ಮಹಿಳೆಯರ ಪೈಕಿ ಶೇ 43ರಷ್ಟು ಜನರು 18 ವರ್ಷಕ್ಕಿಂತಲೂ ಮೊದಲೇ ವಿವಾಹವಾಗಿದ್ದಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಬಾಲ್ಯ ವಿವಾಹದಿಂದಾಗಿ ಬಾಲಕಿಯರು ಹೆಚ್ಚು ಕೌಟುಂಬಿಕ ಹಿಂಸೆ, ದೌರ್ಜನ್ಯ ಮತ್ತು ಶೋಷಣೆಗೆ ಒಳಗಾಗುತ್ತಾರೆ ಎಂದು ವರದಿಯು ತಿಳಿಸುತ್ತದೆ.