Thursday 20 August 2015

ಪಾಟ್ನಾ: ಬಿಹಾರದ ಮುಸ್ಲಿಮರು, ಸುಮಾರು 20,000 ಜನ ಕುಳಿತುಕೊಳ್ಳಬಹುದಾದ ವಿಶ್ವದ ಅತಿ ದೊಡ್ಡ ಹಿಂದು ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡುವ ಔದಾರ್ಯದ ಮೂಲಕ ಕೋಮು ಸೌಹಾರ್ದವನ್ನು ಮೆರೆದು ವಿಶ್ವಕ್ಕೆ ಮಾದರಿಯಾಗಿದ್ದಾರೆ.
“ಕೆಲವು ಮುಸ್ಲಿಮರು ಭೂಮಿಯನ್ನು ದಾನವಾಗಿ ನೀಡಿರುವುದಲ್ಲದೆ, ಇನ್ನು ಕೆಲವು ಅತಿ ಸಾಧಾರಣ ಬೆಲೆಗೆ ಹಿಂದು ದೇವಾಲಯ ನಿರ್ಮಾಣಕ್ಕೆ ಮಾರಾಟ ಮಾಡಿದ್ದಾರೆ. ಮುಸ್ಲಿಮರ ಸಹಾಯವಿಲ್ಲದೆ ಈ ಕನಸು ಸಾಕಾರವಾಗುತ್ತಿರಲಿಲ್ಲ” ಎಂದು ಪಾಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಆಚಾರ್ಯ ಕಿಶೋರ್ ಕುನಾಲ್ ತಿಳಿಸಿದ್ದಾರೆ.
ದೇವಾಲಯ ಕೂಡಲೆ ತಲೆಯೆತ್ತಲು ಮುಸ್ಲಿಮರು ಸಹಕಾರಿಯಾಗಿದ್ದಾರೆ. ಪೂರ್ವ ಚಂಪರನ್ ಜಿಲ್ಲೆಯ ಬಳಿ ಜಾನಕಿ ನಗರದಲ್ಲಿ 5೦೦ ಕೋಟಿ ವಚ್ಚದಲ್ಲಿ ಜೂನ್ ನಿಂದ ದೇವಾಲಯ ನಿರ್ಮಾಣ ಪ್ರಾರಂಭವಾಗಲಿದೆ ಎಂದು ಭಾರತೀಯ ಪೊಲೀಸ್ ಸೇವೆಗಳ ಮಾಜಿ ಆಯುಕ್ತ ಕುನಾಲ್ ತಿಳಿಸಿದ್ದಾರೆ.

“ದೇವಾಲಯಕ್ಕೆ ಹಿಂದುಗಳು ಜಮೀನು ನೀಡುವುದು ಸಾಮಾನ್ಯ ಆದರೆ ದೇವಾಲಯ ನಿರ್ಮಾಣಕ್ಕೆ ಮುಸ್ಲಿಮರು ಜಮೀನು ನೀಡಿರುವುದು ಅಸಾಧಾರಣ ಕೆಲಸ” ಎಂದು ಅವರು ತಿಳಿಸಿದ್ದಾರೆ.
ದೇವಾಲಯ ನಿರ್ಮಾಣಗೊಳ್ಳಲಿರುವ ಜಾಗದ ಮಧ್ಯೆ ಸುಮಾರು ೧೨ ಕ್ಕಿಂತಲೂ ಹೆಚ್ಚಿನ ಮುಸ್ಲಿಂ ಕುಟುಂಬಗಳು ವಾಸವಾಗಿದ್ದಾರೆ. ಅಲ್ಲದೆ ದೇವಾಲಯದ ಮುಂಭಾಗದಲ್ಲಿ ನಿರ್ಮಾಣವಾಗಲಿರುವ ಮುಖ್ಯ ರಸ್ತೆಯ ಬದಿಯಲ್ಲಿ ಹಲವಾರು ಮುಸ್ಲಿಂ ಕುಟುಂಬಗಳು ವಾಸವಾಗಿವೆ ಎಂದು ಅವರು ತಿಳಿಸಿದ್ದಾರೆ.
“ಕೆಲವು ಮುಸ್ಲಿಮರು ತಮ್ಮ ಜಾಗವನ್ನು ದಾನ ಮಾಡಿದರು ಹಾಗೂ ಕೆಲವರು ಅತಿ ಸರಳ ಬೆಲೆಗೆ ಮಾರಿದರು. ಮುಸ್ಲಿಮರು ಮುಂದೆ ಬರದಿದ್ದರೆ ಈ ಯೋಜನೆ ಬಹಳ ವಿಳಂಬವಾಗುತ್ತಿತ್ತು” ಎಂದು ಕುನಾಲ್ ತಿಳಿಸಿದ್ದಾರೆ.
ಮಹಾವೀರ್ ಟ್ರಸ್ಟ್ ಸುಮಾರು ೨೦೦ ಎಕರೆ ಜಾಗವನ್ನು ಖರೀದಿಸಿದೆ. “ಹಿಂದುಗಳು ಹಾಗೂ ಮುಸ್ಲಿಮರು ಸುಮಾರು ೫೦ ಎಕರೆ ಜಾಗವನ್ನು ದಾನ ನೀಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

No comments:

Post a Comment