Wednesday 9 December 2015

ಬೆಂಗಳೂರು: ನಗರಕ್ಕೆ ವಿದ್ಯುತ್‌ ಪೂರೈಕೆ ಆರಂಭವಾಗಿ 110 ವರ್ಷಗಳಾದ ಹಿನ್ನೆಲೆಯಲ್ಲಿ ಬೆಸ್ಕಾಂ ಪ್ರಧಾನ ಕಚೇರಿಯಲ್ಲಿ ಬುಧವಾರ ಸಂಭ್ರಮಾಚರಣೆ ನಡೆಸಲಾಯಿತು.

ನಗರಕ್ಕೆ ವಿದ್ಯುತ್‌ ಪೂರೈಕೆ ಆರಂಭವಾದ ಕಥೆಯೇ ಆಸಕ್ತಿಕರ. ಅಂದು ಉತ್ಪಾದಿಸಲಾಗುತ್ತಿದ್ದ ವಿದ್ಯುತ್ ಸಂಪೂರ್ಣವಾಗಿ ಬಳಕೆಯಾಗುತ್ತಿದುದು ಕೋಲಾರದ ಚಿನ್ನದ ಗಣಿಗಳಿಗೆ. ಶಿವನಸಮುದ್ರದ ಯೋಜನೆ ಎರಡನೇ ಹಂತಕ್ಕೆ ವಿಸ್ತರಣೆಯಾದಾಗ ಚಿನ್ನದ ಗಣಿಗಳಿಗೆ ಅಗತ್ಯ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ವಿದ್ಯುತ್‌ ಲಭ್ಯವಾಗಲಾರಂಭಿಸಿತು.

ಆಗ ಮೈಸೂರು ಸರ್ಕಾರದ ಉಪ ಮುಖ್ಯ ಎಂಜಿನಿಯರ್‌ ಆಗಿದ್ದ ಎ.ಸಿ.ಜೆ. ಲಾಬಿನ್‌ ಅವರು ಸರ್ಕಾರದ ಆರ್ಥಿಕ ತಜ್ಞರಿಗೆ ಪ್ರಸ್ತಾವ ಸಲ್ಲಿಸಿದರು. ‘ಬೆಂಗಳೂರಿನ ಜನರು ವಿದ್ಯುತ್‌ ಪಡೆಯಲು ಆಸಕ್ತರಾಗಿದ್ದು, ಹೆಚ್ಚುವರಿ ವಿದ್ಯುತ್ತನ್ನು ಬೆಂಗಳೂರಿಗೆ ನೀಡಬೇಕು’ ಎಂದು ಅವರು ಪ್ರಸ್ತಾವದಲ್ಲಿ ತಿಳಿಸಿದ್ದರು.  ‘ಚಿನ್ನದ ಗಣಿಗಳು ಬಹುಕಾಲ ಬಾಳಲಾರವು. ಬೆಂಗಳೂರಿಗೆ ವಿದ್ಯುತ್‌ ಕೊಟ್ಟರೆ ಕೈಗಾರಿಕೆಗಳು ಆರಂಭಗೊಳ್ಳುತ್ತವೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ’ ಎಂದು ಅವರು ಉಲ್ಲೇಖಿಸಿದ್ದರು. ಈ ಪ್ರಸ್ತಾವಕ್ಕೆ ಮೈಸೂರು ಮಹಾರಾಜರು 1904ರ ಮೇ 30ರಂದು ಮಂಜೂರಾತಿ ನೀಡಿದರು.

ನಗರಕ್ಕೆ ವಿದ್ಯುತ್‌ ಒದಗಿಸಲೆಂದು 35 ಸಾವಿರ ವೋಲ್ಟ್‌ನ 57 ಮೈಲುದ್ದದ ಏಕಮಾರ್ಗವನ್ನು ಶಿವನಸಮುದ್ರದಿಂದ ನಿರ್ಮಿಸಲಾಯಿತು. ಅಂದಿನ ಕಾಲಕ್ಕೆ ಈ ಯೋಜನೆಗೆ ತಗುಲಿದ ವೆಚ್ಚ ₹7.46 ಲಕ್ಷ.

ನಗರದ ಕೋಟೆ ಸಮೀಪ ‘ಎಂ’ ಸ್ಥಾವರ ಎಂಬ ಹೆಸರಿನಲ್ಲಿ ಅಗತ್ಯ ಕಟ್ಟಡ ನಿರ್ಮಿಸಲಾಯಿತು. ಈ ಪ್ರಸರಣ ಮಾರ್ಗಕ್ಕೆ ಕೆಜಿಎಫ್‌ನಂತೆ ಮರದ ಕಂಬಗಳನ್ನು ಬಳಸದೆ ಉಕ್ಕಿನ ಕಂಬಗಳನ್ನು ಬಳಸಲಾಯಿತು. ಹೀಗೆ 1905ರ ಆಗಸ್ಟ್‌ 5ರಂದು ನಗರಕ್ಕೆ ಬೆಳಕು ಬಂದಿತು.
ದೇಶದಲ್ಲಿ ಜಲವಿದ್ಯುತ್‌ ಪಡೆದ ಪ್ರಮುಖ ನಗರಗಳಲ್ಲಿ ಮೊದಲನೆಯದು ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಯಿತು. ವಿದ್ಯುತ್‌ ಸಂಪರ್ಕ ಕಲ್ಪಿಸಲು ಮೊದಲ ವರ್ಷ ತಗುಲಿದ ವೆಚ್ಚ  ₹5.86 ಲಕ್ಷ. ಆದರೆ, ಆ ವರ್ಷ ಬಂದ ಆದಾಯ ₹36,476.

ವಿದ್ಯುತ್‌ ಬರುವ ಮೊದಲು ಬೀದಿದೀಪಗಳು ಇರಲಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ದಾಖಲೆಗಳ ಪ್ರಕಾರ 1905ರ ಹೊತ್ತಿಗೆ ನಗರದಲ್ಲಿ ಸೀಮೆಎಣ್ಣೆಯ ಲಾಂದ್ರ ಕಂಬಗಳಿದ್ದವು. ಪ್ರತಿದಿನ ಸಂಜೆ ಈ ದೀಪಗಳನ್ನು ಉರಿಸಲೆಂದೇ ಇಬ್ಬರನ್ನು ನೇಮಿಸಲಾಗಿತ್ತು. ಒಬ್ಬ ಮುಂದೆ ಮುಂದೆ ದೀಪಗಳಿಗೆ ಎಣ್ಣೆ ಹಾಕುತ್ತಾ ಸಾಗಿದರೆ ಮತ್ತೊಬ್ಬ ಹಿಂದಿನಿಂದ ದೀಪ ಬೆಳಗಿಸುತ್ತ ಬರುತ್ತಿದ್ದ. ಈ ಲಾಂದ್ರದೀಪಗಳ ನಿರ್ವಹಣೆಗಾಗಿ ವಾರ್ಷಿಕ ₹12 ಸಾವಿರ ವ್ಯಯಿಸಲಾಗುತ್ತಿತ್ತು. ಬೆಂಗಳೂರಿಗೆ ಬೆಳಕು ಬಂದ ಬಗ್ಗೆ ಲೇಖಕ ಗಜಾನನ ಶರ್ಮ ಅವರ ‘ಬೆಳಕಾಯಿತು ಕರ್ನಾಟಕ’ ಎಂಬ ಕೃತಿಯಲ್ಲಿ ವಿವರಗಳಿವೆ.

1905ರಲ್ಲಿ ನಗರಕ್ಕೆ ವಿದ್ಯುತ್‌ ದೀಪ ಬಂದಿದ್ದೇನೋ ಸರಿ. ಆದರೆ, ಅದರ ಬೆಲೆ ತುಂಬಾ ದುಬಾರಿಯಾಗಿತ್ತು. ನಮ್ಮ ಇಂದಿನ ಟ್ಯೂಬ್‌ಲೈಟ್‌ ಅಥವಾ 40 ವಾಟ್‌ನ ಬಲ್ಬ್‌ಗೆ ಅಂದು ತಿಂಗಳೊಂದಕ್ಕೆ ಒಂದು ರೂಪಾಯಿ ಎರಡು ಆಣೆ ವ್ಯಯವಾಗುತ್ತಿತ್ತು. ಆಗ ಬೆಲೆಗಳನ್ನು ಪ್ರತಿ ದೀಪಕ್ಕೆ ಒಂದು ತಿಂಗಳಿಗಿಷ್ಟರಂತೆ ನಿಗದಿಪಡಿಸಲಾಗಿತ್ತು. ದೀಪ ಉರಿಸಿ ಅಥವಾ ಬಿಡಿ ಬೆಲೆ ಮಾತ್ರ ಒಂದು ರೂಪಾಯಿ ಎರಡು ಆಣೆ. 1905ರ ಕೊನೆಯ ಹೊತ್ತಿಗೆ ನಗರದಲ್ಲಿ 1,395 ಬೀದಿದೀಪಗಳನ್ನು ಅಳವಡಿಸಲಾಗಿತ್ತು.

Thursday 3 December 2015